ಅಪಕೃತ್ಯ

ವ್ಯಕ್ತಿಯ ತಪ್ಪು ಸಮಾಜದ ವಿರುದ್ಧವಾಗಿದ್ದರೆ ಅದು ಅಪರಾಧವಾಗುತ್ತದೆ; ಮತ್ತೊಬ್ಬ ವ್ಯಕ್ತಿಗೆ ವಿರುದ್ಧವಾಗಿದ್ದರೆ ಅದು ಅಪಕೃತ್ಯವಾಗುತ್ತದೆ. ಅಪರಾಧಿಯನ್ನು ಅವನ ರಾಜ್ಯ ಶಿಕ್ಷಿಸುತ್ತದೆ. ಅಪಕೃತ್ಯ ವ್ಯಾವಹಾರಿಕ (ಸಿವಿಲ್) ತಪ್ಪು. ಅದರ ನೀತಿಯನ್ನು ನ್ಯಾಯಾಲಯಗಳು ಹೆಚ್ಚುಭಾಗ ತೀರ್ಮಾನಿಸುತ್ತವೆ. ತೊಂದರೆಗೀಡಾದವ ವ್ಯವಹಾರ ಮೊಕದ್ದಮೆ ಹೂಡಿ ಪರಿಹಾರ ಪಡೆಯಬಹುದು. ಅಪಕೃತ್ಯಗಳು ಅನೇಕ. ಅವುಗಳ ರೂಪರೇಖೆಗಳನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಲಾಗಿದೆ.
ಪ್ರಾಚೀನ ನ್ಯಾಯಶಾಸ್ತ್ರದಲ್ಲಿ ಎಲ್ಲ ತಪ್ಪುಗಳನ್ನೂ ಅಪಕೃತ್ಯಗಳೆಂದು ಪರಿಗಣಿಸಲಾಗಿತ್ತು. ತೊಂದರೆಗೀಡಾದವ ಪರಿಹಾರ ಪಡೆಯುತ್ತಿದ್ದ. ಕೊಲೆ, ದರೋಡೆ, ಕಳ್ಳತನ ಮುಂತಾದುವು ಅಪಕೃತ್ಯಗಳಾಗಿದ್ದುವು. ಸಮಾಜ ತನ್ನ ಪ್ರಗತಿಪರ ಹೆಜ್ಜೆಯಲ್ಲಿ ಮುನ್ನಡೆದಂತೆ, ಅನೇಕ ವಿಧವಾದ ಅಪಕೃತ್ಯಗಳು ಬೆಳೆದುಬಂದುವು. ರಾಜ್ಯಗಳ ರಚನೆಯಾಗಿ ಅವುಗಳ ಅಧಿಕಾರವ್ಯಾಪ್ತಿ ವಿಸ್ತರಣೆಯಾದ ಮೇಲೆ, ಸಮಾಜಕ್ಕೆ ವಿರೋಧವಾದ ತಪ್ಪುಗಳನ್ನು ರಾಜ್ಯಶಾಸನಗಳ ಮೂಲಕ ಅಪರಾಧಗಳೆಂದು ನಿರ್ಣಯಿಸಲಾರಂಭಿಸಿದವು. ನ್ಯಾಯಾಲಯ ಸ್ಥಾಪಿತವಾಗಿ ನಡೆವಳಿ ಬೆಳೆಯುತ್ತ ಬಂತು. ಆಧುನಿಕ ರಾಜ್ಯಗಳಲ್ಲಿ ಅಪರಾಧಗಳನ್ನು ನಿರ್ಣಯಿಸುವ ಮತ್ತು ನ್ಯಾಯಾಲಯಗಳ ನಡೆವಳಿಯನ್ನು ಗೊತ್ತುಪಡಿಸುವ ಕಾಯಿದೆಗಳಿವೆ. ಭಾರತದಲ್ಲಿ ದಿ ಇಂಡಿಯನ್ ಪೀನಲ್ ಕೋಡ್ (1960) ಮತ್ತು ದಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (1808) ಜಾರಿಯಲ್ಲಿವೆ. ಮತ್ತೊಬ್ಬ ವ್ಯಕ್ತಿಯ ಹಕ್ಕು ಬಾಧ್ಯತೆಗಳಿಗೆ ಲೋಪತರುವ ತಪ್ಪುಗಳು ಅಪಕೃತ್ಯಗಳಾಗಿಯೇ ಉಳಿದುಬಂದಿವೆ.

ಅಪಕೃತ್ಯಗಳ ತಳಹದಿ 'ಇಂಗ್ಲಿಷ್ ಕಾಮನ್ ಲಾ ದಲ್ಲಿದೆ ಮತ್ತು ಹೆಚ್ಚು ಭಾಗ ನ್ಯಾಯಾಲಯಗಳ ತೀರ್ಪುಗಳ ಮೇಲೆ ಬೆಳೆದುಬಂದಿದೆ. ಅಪಕೃತ್ಯದ ಬಗ್ಗೆ ಎರಡು ವಾದಗಳಿವೆ; ಕಾನೂನು ಪ್ರಕಾರ ಸಮರ್ಥಿಸಬಲ್ಲ ಎಲ್ಲ ಬಾಧೆಗಳೂ ಅಪಕೃತ್ಯವೆಂಬುದು ಒಂದು; ಅಪಕೃತ್ಯಗಳು ಯಾವುವೆಂಬುದು ನಿರ್ಣಯವಾಗಿದ್ದು ಆ ಪಟ್ಟಿಯಲ್ಲಿಲ್ಲದವು ಅಪಕೃತ್ಯಗಳಲ್ಲವೆಂಬುದು ಎರಡನೆಯದು.

ಅಪಕೃತ್ಯದ ಹೊಣೆ ಮುಖ್ಯವಾಗಿ ಕಾನೂನು ನಿಯಮಿಸಿದ ಒಂದು ಕರ್ತವ್ಯವನ್ನುಲ್ಲಂಘಿಸುವುದರಿಂದ ಉದ್ಭವಿಸುತ್ತದೆ. ಈ ಕರ್ತವ್ಯ ಒಬ್ಬನು ಸಾಮಾನ್ಯವಾಗಿ ಇತರರಿಗೆ ಮಾಡಬೇಕಾದ್ದಾಗಿದ್ದು ಅದರ ಉಲ್ಲಂಘನೆ ನ್ಯಾಯಾಲಯ ನಿರ್ಣಯಿಸುವ ಪರಿಹಾರ ಪಡೆಯುವುದರ ಮೂಲಕ ಇತ್ಯರ್ಥವಾಗುತ್ತದೆ.

ಅಪಕೃತ್ಯಗಳನ್ನು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು: 1 ಶರೀರಕ್ಕೆ ಸಂಬಂಧಪಟ್ಟವು ; 2 ಅಸ್ತಿಗೆ ಸಂಬಂಧಪಟ್ಟವು ; 3 ಕೀರ್ತಿಗೆ ಸಂಬಂಧಪಟ್ಟವು ; 4 ಇತರ ತಪ್ಪುಗಳು. (ಸೂಚನೆ: ರಾಜ್ಯವೇ ಅಪಕೃತ್ಯವೆಸಗಿದರೆ, ಸಂವಿಧಾನ ಘಟಕ 299 ಮತ್ತು 300ರ ಪ್ರಕಾರ, ಪರಿಹಾರ ಕೊಡಬೇಕಾಗುತ್ತದೆ).

1 ಶರೀರಕ್ಕೆ ಸಂಬಂಧಪಟ್ಟವು: ಬಲಪ್ರಯೋಗ ಮಾಡುವುದು (ಬ್ಯಾಟರಿ) ಭಯೋತ್ಪಾದನೆ ಮಾಡುವುದು. ಇನ್ನೊಬ್ಬನ ಮೇಲೆ ಉದ್ದೇಶಪಪೂರ್ವಕವಾಗಿ ಬಲಪ್ರಯೋಗ ಮಾಡುವುದು ವ್ಯವಹಾರಾರ್ಹವಾದ ತಪ್ಪು. ಬಲಪ್ರಯೋಗ ನಾನಾ ರೀತಿಯಲ್ಲಾಗಬಹುದು. ಹೊಡೆಯುವುದು, ಕೋಲಿನಿಂದ ಹೊಡೆಯುವುದು; ಹರಿತವಾದ ಆಯುಧಗಳಿಂದ ಘಾಸಿಪಡಿಸುವುದು, ಕಾಮನ ಹಬ್ಬದಲ್ಲಿ ಬಣ್ಣ ಎರಚುವುದು ಇತ್ಯಾದಿ. ತೊಂದರೆಗೊಳಗಾದವ ಗುಣಹೊಂದಲು (ಸರಿಪಡಿಸಿಕೊಳ್ಳಲು) ಆದ ಖರ್ಚು, ಮನೋವ್ಯಥೆ, ಅವಮಾನಗಳ ಬಗ್ಗೆ ಪರಿಹಾರವನ್ನು ಸಂದರ್ಭಾನುಸಾರವಾಗಿ ಕೋರ್ಟಿನಿಂದ ಪಡೆಯುವ ಹಕ್ಕುಳ್ಳವನಾಗುತ್ತಾನೆ.
ಭಯೋತ್ಪಾದನೆ ಮಾಡುವುದೂ ಪರಿಹಾರಕ್ಕೆಡೆಗೊಡುವ ತಪ್ಪು. ಇನ್ನೊಬ್ಬನ ಕಡೆ ಬಂದೂಕ ತೋರಿಸುವುದು, ಹೊಡೆಯುವವನಂತೆ ಹೆದರಿಸುವುದು, ಕತ್ತಿಯನು ಒರೆಯಿಂದ ಹಿರಿಯುವುದು ಇತ್ಯಾದಿ. ಒಂದು ಪಂಚಾಯಿತಿ ಸಭೆಯಲ್ಲಿ ಸದಸ್ಯನೊಬ್ಬ ತುಂಬ ರೇಗಿ ಕೂಗಾಡಲು ಪ್ರಾರಂಭಿಸಿದ. ಅವನನ್ನು ಹೊರಗೆ ಹಾಕಬೇಕೆಂದು ನಿರ್ಣಯವಾಯಿತು. ಕೂಗಾಡುತ್ತಿದ್ದವನು ಇನ್ನೂ ಕೋಪಗೊಂಡು ಅಧ್ಯಕ್ಷನನ್ನು ಕುರ್ಚಿಯಿಂದ ಎಳೆದು ಹಾಕುವುದಾಗಿ ಹೇಳುತ್ತ ಮುಷ್ಟಿಕಟ್ಟಿ ಅಧ್ಯಕ್ಷನ ಕುರ್ಚಿಯತ್ತ ನುಗ್ಗಿದ. ಮಧ್ಯದಲ್ಲಿದ್ದವರು ತಡೆದರು. ಇದು ಭಯೋತ್ಪಾದನೆಯೆಂದೂ ಇದಕ್ಕಾಗಿ ಸದಸ್ಯ ಅಧ್ಯಕ್ಷನಿಗೆ ಪರಿಹಾರ ಕೊಡಬೇಕೆಂದೂ ನ್ಯಾಯಾಲಯದಲ್ಲಿ ಇತ್ಯರ್ಥವಾಯಿತು. (ಸ್ಟೀಫನ್ಸ್) ವರ್ಸಸ್ ಮೇಯರ್ಸ್ 4 ಸಿ. 1830).
ಶಾಸನದ ಅಪ್ಪಣೆಯಿಲ್ಲದೆ ಯಾರೊಬ್ಬನೂ ಮತ್ತೊಬ್ಬನನ್ನೂ ನಿರ್ಬಂಧದಲ್ಲಿಡುವುದು ತಪ್ಪಾಗುತ್ತದೆ. ಈ ನಿರ್ಬಂಧ ಹೊರಗೆ ಹೋಗಲು ಅವಕಾಶವಿಲ್ಲದ ರೀತಿಯಲ್ಲೇ ಇರಬೇಕೆಂಬ ನಿಯಮವಿಲ್ಲ. ಬಂಧಿತನಾದವ ಸ್ವತಂತ್ರವಾಗಿ ನಡೆಯಲು ಅವಕಾಶವಿಲ್ಲದಂತಾದರಾಯಿತು. ಕೂಡಲೆ ತಪ್ಪಾಗುತ್ತದೆ. ಪೋಲೀಸಿನವನೊಬ್ಬ ಒಬ್ಬನ ಬದಲಿಗೆ ಮತ್ತೊಬ್ಬನನ್ನು ವಾರಂಟ್ ಇಲ್ಲದೆ ದಸ್ತಗಿರಿ ಮಾಡಿದ. ವ್ಯಾಜ್ಯನ್ಯಾಯಾಲಯಕ್ಕೆ ಹೋದಾಗ ಪೋಲೀಸಿನವ ನಷ್ಟಕೊಡಬೇಕೆಂದು ತೀರ್ಮಾನವಾಯಿತು (ಕ್ರಿಸ್ಟಿ ವರ್ಸಸ್ ಲಿಜಿನ್ಸ್ 1947 ಎ. ಸಿ. 573).

ಸುಳ್ಳು ಹೇಳಿ ಗಾಬರಿಯುಂಟುಮಾಡುವುದರಿಂದ ಇತರರ ಶರೀರದಲ್ಲಿ ವ್ಯತ್ಯಾಸಗಳಾಗಿ ತೊಂದರೆಯಾದರೆ, ಪರಿಹಾರ ಕೊಡಬೇಕಾಗುವುದು. ಗೃಹಿಣಿಯೊಬ್ಬಳಿಗೆ ಅವಳ ಪತಿ ಆಕಸ್ಮಿಕಕ್ಕೆ ಒಳಗಾಗಿ ಕಾಲುಮುರಿದುಕೊಂಡನೆಂದು ತಮಾಷೆಗಾಗಿ ಹೇಳಿದ. ಇದನ್ನು ಕೇಳಿದ ಆ ಮನೆಯಾಕೆಯ ಕರಿಯ ಕೂದಲುಗಳೆಲ್ಲ ಕೂಡಲೆ ಬೆಳ್ಳಗಾದುವು. ರೋಗಬಂತು. ಸುಳ್ಳು ಹೇಳಿದವ ನಷ್ಟ ಕೊಡಬೇಕೆಂದು ನ್ಯಾಯಾಲಯದಲ್ಲಿ ತೀರ್ಮಾನವಾಯಿತು (ವಿಲ್‍ಕಿನ್‍ಸನ್ ಮರ್ಸಸ್ ಡಾನ್‍ಟನ್ 1897ಕ್ಯೂ. ಬಿ. 57).
ಕುಟುಂಬ ಜೀವನದಲ್ಲಿ ಪ್ರವೇಶಿಸಿ ಗಂಡಹೆಂಡಿರನ್ನು ಅಗಲಿಸುವುದು, ತಂದೆ ಮಕ್ಕಳನ್ನು ಅಗಲಿಸುವುದು ಮೊದಲಾದುವು ನಷ್ಟಕೊಡಬೇಕಾದ ತಪ್ಪುಗಳಾಗುತ್ತವೆ. ಅನಾಥವೃದ್ಧನೊಬ್ಬನಿಗೆ ಸೇವೆಮಾಡುತ್ತಿದ್ದ ಮಗಳನ್ನು ಸೇವೆಯಿಂದ ತಪ್ಪಿಸಿದವನು ವೃದ್ಧನಿಗೆ ಆ ಬಗ್ಗೆ ಪರಿಹಾರಧನ ಕೊಡಬೇಕಾಯಿತು (ಟೆರ್ರಿ ವರ್ಸಸ್ ಹಚಿನ್‍ಸನ್ 2868ಎಲ್. ಬಿ.599).

2 ಆಸ್ತಿಗೆ ಸಂಬಂಧಪಡುವ ತಪ್ಪುಗಳು: ಸ್ಥಿರಾಸ್ತಿಗಳು: ಸ್ಥಿರಾಸ್ತಿಗಳ ಅತಿಕ್ರಮ ಪ್ರವೇಶ: ಒಬ್ಬನ ಸ್ವಾಧೀನದಲ್ಲಿರುವ ಭೂಮಿ, ಮನೆ ಇತ್ಯಾದಿಗಳಲ್ಲಿ ಮತ್ತೊಬ್ಬನು ಅಪ್ಪಣೆಯಿಲ್ಲದೆ ಪ್ರವೇಶಿಸುವುದು ಹಸ್ತಕ್ಷೇಪಮಾಡುವುದು. ಅತಿಕ್ರಮವೆನಿಸಿಕೊಳ್ಳುತ್ತದೆ. ಇಲ್ಲಿ ವಿಶೇಷವಾದ ಕೆಲವು ನಿದರ್ಶನಗಳನ್ನು ಮಾತ್ರ ಕಾಣಿಸಿದೆ. ವಿವರಗಳಿಗೆ    (ನೋಡಿ- ಅತಿಕ್ರಮ)
ನಿಮ್ಮ ಗೊಬ್ಬರದ ಗುಂಡಿ ನೀರನಲ್ಲಿ ಕರಗಿ, ಗೊಬ್ಬರ ಹರಿದು ಪಕ್ಕದ ಮನೆಯವರ ಗೋಡೆಗೆ ಸೇರಿಕೊಂಡರೆ ಅತಿಕ್ರಮಪ್ರವೇಶವೆನಿಸುತ್ತದೆ. ಇನ್ನೊಬ್ಬರ ಭೂಮಿಯ ಮೇಲೆ ಗಾಳಿಪಟ ಆಡಿಸಿದರೆ ಅದೂ ಅತಿಕ್ರಮ. ರಾಜಬೀದಿಗಳಿಗೂ ಹೆದ್ದಾರಿಗಳಿಗೂ ಈ ನಿಯಮ ಅನ್ವಯಿಸುತ್ತದೆ. ಹೆದ್ದಾರಿಯಲ್ಲಿ ನಿಂತು ಬಂದೂಕವನ್ನು ಹಾರಿಸುತ್ತ ಗದ್ದಲಮಾಡಿ ಅಕ್ಕಪಕ್ಕದವರು ಸಾಕಿರುವ ಹಕ್ಕಿಗಳಿಗೆ ಗಾಬರಿಮಾಡುವುದು ಅತಿಕ್ರಮ (ಹ್ಯಾರಿಸನ್ ವರ್ಸಸ್ ಡ್ಯೂಕ್ ಆಫ್ ರೆಡ್‍ಲ್ಯಾಂಡ್ 1893 ಕ್ಯೂ. ಬಿ. 142). ಜೂಜುಕುದುರೆಗಳು ಅಭ್ಯಾಸಮಾಡುವಾಗ ಹೆದ್ದಾರಿಯಲ್ಲಿ ಓಡಾಡುತ್ತ ಅವುಗಳ ಚಲನವಲನಗಳನ್ನು ಗುರುತುಮಾಡಿಕೊಳ್ಳುವುದು ಅತಿಕ್ರಮವೆಂದು ಪರಿಗಣಿಸಲ್ಪಟ್ಟಿದೆ (ಹಿಕ್ಮನ್ ವರ್ಸಸ್ ಮೈಸಿ 1900. 1. ಕ್ಯೂ. ಬಿ. 752). ನಿಮ್ಮ ಭೂಮಿಯ ಮೇಲೆ ಇತರರ ವಿಮಾನಗಳು ಹಾರಾಡಿದರೆ ಅದು ಅತಿಕ್ರಮ; ಶಾಸನಗಳಿಂದ ಇದಕ್ಕೆ ವಿನಾಯಿತಿ ದೊರಕಿದೆ. ಮಾಲೀಕರು ಇತರರಿಗೆ ತನ್ನ ಭೂಮಿಗೆ ಅಥವಾ ಕಟ್ಟಡಕ್ಕೆ ಪ್ರವೇಶಮಾಡಿ ಅಲ್ಲಿ ಏನಾದರೂ ಕೆಲಸಮಾಡಲು ಅನುಜ್ಞೆ ಕೊಟ್ಟಮೇಲೆ ಅದನ್ನು ಯಾವ ಸಂಧರ್ಭಗಳಲ್ಲಿ ಹಿಂದಕ್ಕೆ ತೆಗೆದುಕೊಳ್ಳಬಹುದೆಂಬ ಪ್ರಶ್ನೆ ಸ್ವಲ್ಪ ಜಟಿಲವಾದದ್ದು. ನಾಟಕ ಸಿನಿಮಾ ನೋಡಲು ಟಿಕೆಟ್ ಪಡೆದು ಒಳಗೆ ಹೋದ ಮೇಲೆ, ಮಾಲೀಕರು ಟಿಕೆಟ್ ಪಡೆದವನನ್ನು ಆಟದ ಮಧ್ಯದಲ್ಲಿ ಹೊರಗೆ ಕಳುಹಿಸಿದರೆ ಒಪ್ಪಂದವನ್ನು ಮೀರಿದಂತಾಗಿ ನಷ್ಟಕ್ಕೆ ಗುರಿಯಾಗುತ್ತಾರೆ. ಹೊರಗೆ ಹೋಗಲು ತಿರಸ್ಕರಿಸಿದವನನ್ನು ಬಲಪ್ರಯೋಗದಿಂದ ಹೊರಕ್ಕೆ ಕಳುಹಿಸಿದಲ್ಲಿ ನಷ್ಟ ಕೊಡಬೇಕೆಂದು ತೀರ್ಮಾನವಾಗಿರುತ್ತದೆ (ಹರ್ಸ್ಟ ವರ್ಸಸ್ ವಿಚ್ಚರ್ ಪ್ಯಾಲೇಸ್. 1915. 1. ಕೆ. ಬಿ. 

1) ಕಾನೂನಿನ ಬಲದಿಂದ ಒಳಕ್ಕೆ ಪ್ರವೇಶಮಾಡುವ ಹಕ್ಕಿದ್ದು, ಪ್ರವೇಶಿಸಿದ ಆನಂತರ ತಪ್ಪು ಮಾಡಿದರೆ ಅದೂ ನಷ್ಟ ಕೊಡಬೇಕಾದ ಸಂದರ್ಭ. ಪೋಲೀಸ್ ಅಧಿಕಾರಿಗಳು ಕಾನೂನಿನಂತೆ ಮನೆಗೆ ಪ್ರವೇಶಮಾಡಿ ಆನಂತರ ಅಲ್ಲಿ ಏನಾದರೂ ತಪ್ಪು ಮಾಡಿದರೆ ನಷ್ಟಕ್ಕೆ ಗುರಿಯಾಗುತ್ತಾರೆ (ಟ್ರೆಸ್‍ಪಾಸ್ ಅ್ಯಬ್ ಇನಿಷಿಯೊ).
ಬೆಳಕು, ಗಾಳಿ, ದಾರಿ, ಗೋಡೆ, ಎರಡು ಮನೆಗಳ ಮಧ್ಯದ ಓಣಿಯ ಹಕ್ಕುಗಳು ಅನುಭೋಗದ ಹಕ್ಕುಗಳು. ಅವು ಅನುಭೋಗದ ಹಕ್ಕಿನ ಕಾಯಿದೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. 
ಚರಮಾಲುಗಳ ದುರುಪಯೋಗ: ಇನ್ನೊಬ್ಬರ ಪದಾರ್ಥವನ್ನು ವಿನಾಕಾರಣ ಇಟ್ಟುಕೊಳ್ಳುವುದು. ಜಪ್ತಿಮಾಡಿಸುವುದು ಈ ವರ್ಗಕ್ಕೆ ಸೇರುತ್ತವೆ. ಒಡೆತನ ಮತ್ತು ಸ್ವಾಧೀನಗಳ ಬಗ್ಗೆ ಸ್ಥಿರಾಸ್ತಿಯ ವಿಚಾರದಲ್ಲಿ ಮೇಲೆ ಹೇಳಿರುವ ನಿಯಮಗಳೇ ಇವಕ್ಕೂ ಅನ್ವಯಿಸುತ್ತವೆ. ಚರಮಾಲುಗಳ ಮಾಲೀಕನಾಗಿರದಿದ್ದರೂ ಸ್ವಾಧೀನದಲ್ಲಿರಲು ಹಕ್ಕುಳ್ಳವನಾಗಿದ್ದರೆ ಅವನು ಕೋರ್ಟಿನಲ್ಲಿ ಕ್ರಮನಡೆಸಬಹುದು. ಸ್ವಾಧೀನದಲ್ಲಿರುವವ ಒಬ್ಬನಾಗಿದ್ದು, ಮಾಲೀಕ ಬೇರೆಯವನಾಗಿದ್ದರೆ ಅಥವಾ ಮಾಲೀಕ ಯಾರೆಂಬುದು ಗೊತ್ತಿಲ್ಲದೆ ಹೋದರೆ ಸ್ವಾಧೀನದಲ್ಲಿರುವವನ ಹಕ್ಕಿನ ವ್ಯಾಪ್ತಿಯ ಪರಿಮಿತಿ ಗಮನಾರ್ಹ. ಹೊಗೆಯಗೂಡು ಗುಡಿಸುವ ಬಾಲಕನೊಬ್ಬನಿಗೆ ಒಂದು ವಜ್ರದ ಒಡವೆ ಸಿಕ್ಕಿತ್ತು. ಮಾಲೀಕ ಯಾರೆಂದು ಗೊತ್ತಿರಲಿಲ್ಲ. ಅವನಿಗೆ ಅದನ್ನು ಒಬ್ಬ ಅಕ್ಕಸಾಲಿಗನ ಬಳಿಗೆ ತೆಗೆದುಕೊಂಡು ಹೋದ. ಅಕ್ಕಸಾಲಿಗ ವಜ್ರವನ್ನು ಬೇರ್ಪಡಿಸಿ ಚಿನ್ನವನ್ನು ಹಿಂದಕ್ಕೆ ಕೊಟ್ಟು ವಜ್ರಕ್ಕೆ 1 1/2 ಪೆನ್ನಿ ಕೊಡುವುದಾಗಿ ಹೇಳಿದನು. ಬಾಲಕ ಒಪ್ಪಲಿಲ್ಲ. ಅಕ್ಕಸಾಲಿಗ ವಜ್ರವನ್ನು ಹಿಂದಕ್ಕೆ ಕೊಡಲಿಲ್ಲ. ಬಾಲಕ ಅಕ್ಕಸಾಲಿಗನ ಮೇಲೆ ವ್ಯವಹಾರ ಹೂಡಿದ. ಅಕ್ಕಸಾಲಿಗ ವಜ್ರ ಹುಡುಗನಿಗೆ ಸೇರಿದ್ದಲ್ಲವೆಂದೂ ಅದರ ಮಾಲಿಕ ಗೊತ್ತಿಲ್ಲದೆ ಇರುವುದರಿಂದ ಅದನ್ನು ಹುಡುಗ ಕೇಳಲು ಹಕ್ಕಿಲ್ಲವೆಂದೂ ವಾದಿಸಿದ. ಮಾಲೀಕ ಪತ್ತೆಯಾಗುವವರೆಗೆ ಆ ವಜ್ರ ಹುಡುಗನ ಸ್ವಾಧೀನದಲ್ಲಿರಬಹುದೆಂದು ನ್ಯಾಯಾಲಯ ತೀರ್ಮಾನಿಸಿತು (ಅರ್ ಮೆರಿ ವರ್ಸಸ್ ಡಿಲಾಮರಿ 1721-1-ಎಸ್.ಟಿ.505). ವ್ಯಾಪಾರಕ್ಕಾಗಿ ಹೋದ ಗಿರಾಕಿಯೊಬ್ಬನಿಗೆ ಅಂಗಡಿಯೊಂದರಲ್ಲಿ ಯಾರೋ ಕೆಡವಿಹೋದ ನೋಟುಗಳ ಕಂತೆ ಸಿಕ್ಕಿತು. ಆ ಕಂತೆ ತನ್ನದೆಂದು ಅಂಗಡಿಯವನೂ ತನ್ನದೆಂದು ಗಿರಾಕಿಯೂ ಜಗಳವಾಡುತ್ತ ನ್ಯಾಯಾಲಯಕ್ಕೆ ದೂರಿತ್ತರು. ಅದು ಆಂಗಡಿಯಲ್ಲಿ ಸಿಕ್ಕಿದರೂ ಅದರ ಸ್ವಾಧೀನದ ಹಕ್ಕು ಗಿರಾಕಿಯದೆಂದು ತೀರ್ಮಾನವಾಯಿತು (ಬ್ರಿಡ್ ಜಸ್ ವರ್ಸಸ್ ಹಾಕ್ಸ್ ವರ್ತ್ 1851). 
	
ಹರಾಜು ಮಾಡುವವ ತಿಳಿವಳಿಕೆಯಿಲ್ಲದೆ ತಮ್ಮದಲ್ಲದ ಮಾಲುಗಳನ್ನು ಹರಾಜು ಮಾಡಿದರೆ ವಾರಸುದಾರ ಹರಾಜು ಮಾಡುವವನ ಮೇಲೆ ಕ್ರಮ ನಡೆಸಬಹುದು. ಇದೊಂದು ವಿಚಿತ್ರವಾದ ನಿಯಮ. ಈ ಸಂದರ್ಭಗಳಲ್ಲಿ ಕೊಡಬೇಕಾದ ಪರಿಹಾರ ಆಯಾ ವ್ಯಾಜ್ಯದ ಔಚಿತ್ಯವನ್ನಲಂಬಿಸಿರುತ್ತದೆಯಲ್ಲದೆ ಕೋರ್ಟಿನವರ ಅಭಿಪ್ರಾಯಕ್ಕೆ ಒಳಪಟ್ಟಿರುತ್ತದೆ. ನಮ್ಮ ಮಾಲುಗಳು ಇತರರ ಜಮೀನಿನಲ್ಲಿ ಅಥವಾ ಮನೆಯಲ್ಲಿದ್ದರೆ ಅಲ್ಲಿಗೆ ಪ್ರವೇಶಿಸಿ, ಅವುಗಳನ್ನು ತೆಗೆದುಕೊಂಡು ಬರುವ ಹಕ್ಕು ಮಾಲೀಕನಿಗಿರುತ್ತದೆ. ಆದರೆ, ಆ ಹಕ್ಕನ್ನು ಸಂದರ್ಭೋಚಿತ ಉಪಯೋಗಿಸಬೇಕು.
	

3 ಕೀರ್ತಿಗೆ ಸಂಬಂಧಪಟ್ಟ (ಮಾನನಷ್ಟದ) ಅಪಕೃತ್ಯಗಳು: ಒಬ್ಬನ ಸ್ಥಾನ ಮಾನಗಳನ್ನು ಇತರರ ದೃಷ್ಟಿಯಲ್ಲಿ ಕಡಿಮೆಮಾಡುವ ಮಾತು, ಬರೆವಣಿಗೆ, ಚಿತ್ರ ಇತ್ಯಾದಿಗಳು ಮಾನನಷ್ಟವೆನಿಸಿಕೊಳ್ಳುತ್ತವೆ. ಸಾಮಾನ್ಯಜನರ ಮಾತುಗಳನ್ನು ಕೇಳಿ, ಬರೆವಣಿಗೆಯನ್ನು ಓದಿ, ಚಿತ್ರಗಳನ್ನು ನೋಡಿ, ಒಬ್ಬನ ವಿಚಾರದಲ್ಲಿ ಕೀಳುಭಾವನೆ ತಾಳುವಂತಾದರೆ ಅದು ಮಾನನಷ್ಟ; ಬರಿಯಬಯ್ಗಳ ಮಾನನಷ್ಟವಲ್ಲ. ಕ್ರಿಮನಲ್ ತಕ್ಸೀರನ್ನು ಮಾಡಿರುವನೆಂದು ದೂಷಿಸುವುದು, ಸ್ತ್ರಿಯರ ನಡತೆಯ (ಶೀಲದ) ವಿಷಯದಲ್ಲಿ ದೂಷಣೆಮಾಡುವುದು, ಒಬ್ಬನ ವ್ಯಾಪಾರೋದ್ಯೋಗಗಳ ಬಗ್ಗೆ ಅವನಿಗೆ ತಕ್ಕ ಸಾಮಥ್ರ್ಯವಿಲ್ಲವೆಂದು ಹೇಳುವುದು ಮಾನನಷ್ಟವೆನಿಸಿಕೊಳ್ಳುತ್ತದೆ (ಸ್ಲಾಂಡರ್). ಒಬ್ಬ ಸೈನ್ಯಾಧಿಕಾರಿ ಸಂಸತ್ ಸದಸ್ಯನಾಗಿದ್ದ. ಸೈನ್ಯದಲ್ಲಿ ಕೆಲಸಮಾಡಲು ಅನುಕೂಲಿಸುವಂತೆ ಸಂಸತ್ತಿನಿಂದ ರಜಪಡೆದಿದ್ದ. ಕೆಲವು ದಿನಗಳ ಅನಂತರ ಯುದ್ಧದಲ್ಲಿ ಗಾಯಗೊಂಡನೆಂದು ಅವನನ್ನು ಸೈನ್ಯದಿಂದ ನಿವೃತ್ತಿಮಾಡಿದರು. ಆತನು ಪಾರ್ಲಿಮೆಂಟ್ ಸಭೆಗೆ ಹಿಂದಕ್ಕೆ ಬಂದಾಗ, ಇನ್ನೊಬ್ಬ ಸದಸ್ಯ, ಅವನ ಬಗ್ಗೆ ಈ ರೀತಿ ಹೇಳಿದ. ಯುದ್ಧದಲ್ಲಿ ಗಾಯಗೊಂಡುದಕ್ಕಾಗಿ ಅಲ್ಲ ಕುಡುಕನಾದ್ದರಿಂದ ನಿವೃತ್ತನಾದ ಎಂದು ಹೇಳುವುದು ಅವನನ್ನು ಅವಹೇಳನಮಾಡಿದಂತೆ ಎಂದು ನ್ಯಾಯಾಲಯ ತೀರ್ಪುಕೊಟ್ಟು ಪರಿಹಾರ ಕೊಡಿಸಿತು (ಬುಲ್ ವರ್ಸಸ್ ವಾಸ್ ಕ್ವೆಸ್ 1947, 1.ಎ.ಇ.ಆರ್. 334). ಪುರಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಕುಡುಕನೆಂದು ಕರೆಯುವುದು ಮಾನನಷ್ಟವಲ್ಲವೆಂದು ತೀರ್ಮಾನವಾಗಿರುತ್ತೆ (ಅಲೆಕ್ಸಾಂಡರ್ ವರ್ಸಸ್ ಜೆಂಕಿನ್ಸ್ 1892. 1.ಕ್ಯೂ.ಬಿ. 797).
	
ಜಿದ್ದಿನಿಂದ, ಅವಮಾನಮಾಡಬೇಕೆಂಬ ಉದ್ದೇಶದಿಂದ ಮಾನನಷ್ಟ ಉಂಟು ಮಾಡುವುದು ಹೆಚ್ಚಿನ ಪರಿಹಾರಕ್ಕೆ ಅವಕಾಶ ಕೊಡುತ್ತದೆ. ಯಾವ ಸಂದರ್ಭದಲ್ಲಿ ಯಾವ ಹೇಳಿಕೆಗಳಿಂದ ಮಾನನಷ್ಟವಾಗಿದೆ ಎಂದು ತೀರ್ಮಾನಿಸುವುದು ಕಷ್ಟ. ಅದು ಪ್ರತಿ ವ್ಯಾಜ್ಯದ ಸ್ವರೂಪ, ವಿಷಯ ಇವುಗಳನ್ನವಲಂಬಿಸಿರುತ್ತದೆ. ಒಂದು ಬ್ಯಾಂಕಿನ ಚೆಕ್ಕುಗಳನ್ನು ನಾವು ಅಂಗೀಕರಿಸುವುದಿಲ್ಲ ಎಂದು ಒಬ್ಬ ವ್ಯಾಪಾರಿ ಹೇಳಿದರೆ ಅದು ಮಾನನಷ್ಟವಾಗುವುದಿಲ್ಲ (ಕ್ಯಾಪಿಟಲ್ ಮತ್ತು ಕಾಂಡಿ ಬ್ಯಾಂಕ್ ವರ್ಸಸ್ ಹೆಂಡಿ 1882. 741). ಒಬ್ಬನ ಏಜೆನ್ಸಿಯನ್ನು ಕೊನೆಗಾಣಿಸಿದೆ ಎಂದು ಹೇಳುವುದೂ ಮಾನನಷ್ಟವಲ್ಲ (ನೆವಿಲ್ ವರ್ಸಸ್ ಪೈನ್ ಆರ್ಡ್ ಇನ್ ಷೂರೆನ್ಸ್ ಕಂ. 1897 ಎ.ಸಿ. 68). ಕೆಲವುವೇಳೆ ಮಾತುಗಳು ಉತ್ಪ್ರೇಕ್ಷೆಯಿಂದ ಕೂಡಿರಬಹುದು; ಅಥವಾ ಗೂಢಾರ್ಥವನ್ನು ಹೊಂದಿರಬಹುದು. ಅವುಗಳ ಅರ್ಥ ಬಿಡಿಸಿದ ಹೊರತು ಮಾನನಷ್ಟ ಗೊತ್ತಾಗದಿರಬಹುದು. ಅಂಥ ಸಂದರ್ಭಗಳಲ್ಲಿ ಅವುಗಳ ಅರ್ಥವನ್ನು ಬಿಡಿಸಿ ಮಾನನಷ್ಟವಾಗಿರುವ ರೀತಿಯನ್ನು ತೋರಿಸಿಕೊಡಬಹುದು. ಇದಕ್ಕೆ ಛೇಕೋಕ್ತಿ (ಇನ್ನೂಯಂಡೋ) ಎಂದು ಹೆಸರು. ಒಬ್ಬನನ್ನು ಮೀರ್ ಸಾದಕ್ ಎಂದು ಕರೆದರೆ ಅವನು ದ್ರೋಹಿ ಎಂಬ ಅರ್ಥ ಬರುತ್ತದೆ. ಆಗ ಟಿಪ್ಪುಸುಲ್ತಾನನ ಕಾಲದಲ್ಲಿದ್ದ ಈ ಚರಿತ್ರಾರ್ಹ ವ್ಯಕ್ತಿ ಏನು ಮಾಡಿದ್ದ ಎಂಬುದನ್ನು ವಿಶದಪಡಿಸಬೇಕು.
	
ಮಾನನಷ್ಟದ ಹೇಳಿಕೆಗಳು ಮೂರನೆಯವನ ಗಮನಕ್ಕೆ ಬರಬೇಕು (ಸಾರ್ವಜನಿಕವಾಗಬೇಕು). ನಷ್ಟಹೊಂದಿದವನೊಬ್ಬನಿಗೆ ಅದು ತಿಳಿದರೆ ಅದಕ್ಕೆ ಪರಿಹಾರವಿಲ್ಲ. ನಿಮ್ಮನ್ನು ಒಬ್ಬ ಅವಮಾನವಾಗುವಂತೆ ಬಯ್ದು ಕಾಗದ ಬರೆದು ಲಕೋಟೆಯಲ್ಲಿ ಹಾಕಿ ಕಳುಹಿಸಿ, ಅದನ್ನು ನೀವು ಓದಿದರೆ ಮಾನನಷ್ಟದಾಗುವುದಿಲ್ಲ. ನಿಮ್ಮ ಅಡಿಗೆಯವನೊ, ಮನೆಯಾಕೆಯೊ, ಗಮಾಸ್ತನೊ ಒಡೆದು ಓದಿದರೆ ಅದು ಮಾನನಷ್ಟದ ಪರಿಮಿತಿಗೆ ಸಿಗುತ್ತದೆ. ಹೀಗೆಯೇ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಮಾಚಾರಗಳು, ಹಸ್ತಪತ್ರಿಕೆಗಳು, ಪ್ರಕಟಣೆಗಳು ಇತ್ಯಾದಿ. ಒಬ್ಬ ಕೊಟ್ಟ ಮಾನನಷ್ಟದ ಹೇಳಿಕೆಗಳನ್ನು ಇನ್ನೊಬ್ಬ ಮತ್ತೆ ಹೇಳಿದರೆ ಆತನೂ ಮಾನನಷ್ಟಕ್ಕೆ ಗುರಿಯಾಗುತ್ತಾನೆ. ಇತರರು ಹೇಳಿದ್ದನ್ನು ಮಾತ್ರ ತಾನು ಪುನಃ ಹೇಳಿದನೆಂದ ಮಾತ್ರಕ್ಕೆ ವಿನಾಯಿತಿಯಿಲ್ಲ. ಸತ್ಯವಾದದ್ದನ್ನು ಹೇಳಿ, ಅನಾವಶ್ಯಕವಾದ ಪ್ರಕಟಣೆ ಮಾಡದೆ. ಹಾಳತವಾಗಿ ಪ್ರಚುರಪಡಿಸುವುದೂ ಸಾರ್ವಜನಿಕ ವಿಷಯಗಳಲ್ಲಿ ಟೀಕೆ ಮಾಡುವುದೂ ಸಂಸತ್ ಶಾಸನ ಸಭೆಗಳ ನಡೆವಳಿಕೆಗಳನ್ನು ಪ್ರಕಟಿಸುವುದೂ ನ್ಯಾಯಾಲಯ ವ್ಯವಹಾರಗಳನ್ನು ಪ್ರಕಟಿಸುವುದೂ ನ್ಯಾಯವ್ಯವಹಾರದಲ್ಲಿ ವ್ಯಾಜ್ಯಕ್ಕೆ ಸಂಬಂಧ ಪಟ್ಟಂತೆ ಮಾತನಾಡುವುದೂ ಮೇಲಿನ ಅಧಿಕಾರಿಗಳಿಗೆ ಕೆಳಗಿನ ಅಧಿಕಾರಿಗಳ ಮೇಲೆ ದೂರು ಕೊಡುವುದೂ, ವರದಿ ಮಾಡುವುದೂ-ಇವೆಲ್ಲ ಮಾನನಷ್ಟ ಮೊಖದ್ದಮೆಯಲ್ಲಿ ವಿನಾಯಿತಿಯ ವರ್ಗಕ್ಕೆ ಸೇರುತ್ತವೆ. ಕಾನೂನಿನ ಪ್ರಕಾರ ಮಾನನಷ್ಟದ ಮಾತುಗಳಿಗೆ ಈ ಸಂದರ್ಭಗಳಲ್ಲಿ ವಿಶೇಷ ರಕ್ಷಣೆಯಿದೆ. ಗ್ರಂಥಕರ್ತ ಒಬ್ಬ ವ್ಯಕ್ತಿಯ ಹೆಸರು ಬರೆದು ಮಾನನಷ್ಟ ಮಾಡಿದರೆ. ಆ ವ್ಯಕ್ತಿ ಗ್ರಂಥಕರ್ತನ ಗಮನದಲ್ಲಿಲ್ಲದೆ ಇದ್ದರೂ ಬರಿಯ ಕಾಲ್ಪನಿಕ ವ್ಯಕ್ತಿಯಾಗಿದ್ದರೂ ಅಂಥವನಿಗೆ ಅದು ಅನ್ವಯವಾಗುವುದಾದರೆ ಮಾನನಷ್ಟಕ್ಕೆ ಗುರಿಯಾಗುತ್ತಾನೆ. ಲಂಡನ್ ಪತ್ರಿಕೆಯೊಂದು ಜೋನ್ಸ್ (ಎಂಬ ಒಬ್ಬ ಪಾದ್ರಿ) ಫ್ರಾನ್ಸ್ ದೇಶದಲ್ಲಿ ಒಂದು ಹಬ್ಬದಲ್ಲಿ ತನ್ನ ವಿಪರೀತ ನಡೆವಳಿಕೆಯಿಂದ ಅವಮಾನವಾಗುವ ರೀತಿಯಲ್ಲಿ ವರ್ತಿಸಿದನೆಂಬ ಪ್ರಕಟಣೆ ಮಾಡಿತು. ಅದೇ ಸಮಯದಲ್ಲಿ ಲಂಡನ್ನಿನಲ್ಲಿ ಆರ್ಡಿಮಿನ್ ಜೋನ್ಸ್ ಎಂಬ ಬ್ಯಾರಿಸ್ಟರೊಬ್ಬನಿದ್ದ. ಅವನ ಸ್ನೇಹಿತರು ಈ ವರ್ತಮಾನವನ್ನು ಓದಿದೊಡನೆ ಇದು ತಮ್ಮ ಸ್ನೇಹಿತ ಜೋನ್ಸ್ ಗೆ ಅನ್ವಯಿಸುತ್ತದೆಂದು ತಾವು ಭಾವಿಸುವುದಾಗಿ ಸಾಕ್ಷ್ಯ ಹೇಳಿದರು. ಪತ್ರಿಕೆ ಜೋನ್ಸ್ ಗೆ ಮಾನನಷ್ಟ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು (ಹುಲ್ವನ್ ವರ್ಸಸ್ ಜೋನ್ಸ್ 1910, ಎ.ಸಿ.20). ಇಡೀ ಒಂದು ಗುಂಪನ್ನೇ ಮಾನನಷ್ಟಕ್ಕೆ ಈಡು ಮಾಡಬಹುದು. ಆಗ ಆ ಗುಂಪಿನವರಿಗೆ ಪರಿಹಾರ ಪಡೆಯುವ ಹಕ್ಕಿದೆ. ಆದರೆ, ಯಾವುದೊಂದು ಗುಂಪಿಗೂ ಅನ್ವಯಿಸಲು ಸಾಧ್ಯವಿಲ್ಲದಿರುವ ಹಾಗೂ ಸರ್ವರಿಗೂ ಅನ್ವಯಿಸುವ ಮಾತುಗಳು ಪರಿಹಾರಕ್ಕೆ ಅವಕಾಶ ಕೊಡುವುದಿಲ್ಲ. ನ್ಯಾಯಾಧೀಶರನ್ನಾಗಲಿ, ನ್ಯಾಯಾಲಯದ ವ್ಯವಹಾರಗಳ ವಿಷಯದಲ್ಲಾಗಲಿ ಅವಮಾನಕರವಾದ, ಅವಹೇಳನ ಮಾಡುವ ಹೇಳಿಕೆಗಳು ಮಾನನಷ್ಟದ ವರ್ಗಕ್ಕೆ ಸೇರುತ್ತವೆ. ಅಲ್ಲದೆ ಕಂಟೆಂಪ್ಟ್ ಆಫ್ ಕೋರ್ಟ್ ನಿಯಮದ ವ್ಯಾಪ್ತಿಗೆ ಒಳಪಡುತ್ತವೆ. ನ್ಯಾಯಾಧೀಶರು, ಸಾಕ್ಷಿಗಳು, ವಕೀಲರು ಮತ್ತು ಕಕ್ಷಿಗಾರರಿಗೆ ವಿಶೇಷ ವಿನಾಯಿತಿಗಳಿವೆ. ಪರಿಮಿತಿಗಳೂ ಇವೆ. (ದಿ ಕಂಡೆಂಪ್ಟ್ ಆಫ್ ಕೋರ್ಟ್ ಆ್ಯಕ್ಟ್ 1952).
	
4 ಇತರ ತಪ್ಪುಗಳು ಮೋಸ (ಡಿಸೀಟ್): ಆಡ್ವೊಕೇಟ್ ಆಗಿಲ್ಲದಿದ್ದರೂ ಗೌನ್ ಮತ್ತು ಬ್ಯಾಂಡ್ ಗಳನ್ನು ಧರಿಸಿ ಇತರರಿಗೆ ತಪ್ಪು ತಿಳಿವಳಿಕೆ ಬರುವಂತೆಮಾಡಿ ವಕಾಲತ್ತು ಪಡೆದರೆ. ಮಾತನಾಡದಿದ್ದರೂ ಮೋಸ ಮಾಡಿದಂತಾಗುತ್ತದೆ. ಒಂದು ಕಂಪನಿಯ ಡೈರೆಕ್ಟರುಗಳು ಸಾಲ ತೆಗೆದುಕೊಳ್ಳುವ ಜಾಹಿರಾತಿನಲ್ಲಿ ಸುಳ್ಳು ಉದ್ದೇಶಗಳನ್ನು ನಮೂದಿಸಿದಲ್ಲಿ ಅದು ಮೋಸವೆನ್ನಿಸುತ್ತದೆ (ಡೆರ್ರಿ ವರ್ಸಸ್ ವೀಕ್ 1889, 14, ಎ.ಸಿ. 337, ವಿಶೇಷ ಸಂದರ್ಭದ ವಿವರಣೆ). ಭಿಕಾರಿ (ಪಾಪರ್) ಆಗಿರುವನನ್ನು ಆಸ್ತಿವಂತನೆಂದು ಹೇಳಿ ಸಾಲ ಕೊಡಿಸುವುದು ಮೋಸ. ಏಜೆಂಟರುಗಳ ಮೋಸದ ಹೇಳಿಕೆಗಳಿಗೆ ಯಜಮಾನರ ಜವಾಬ್ದಾರಿಯಿರುತ್ತದೆ. ಇದರಿಂದ ನಷ್ಟವಾದಲ್ಲಿ ಯಜಮಾನ ನಷ್ಟ ಕೊಡಬೇಕು (ಆರ್ಮ್ ಸ್ಟ್ರಾಂಗ್ ವರ್ಸಸ್ ಸ್ಟ್ರೇಯನ್ 1952, ಕೆ.ಬಿ. 232). ಇದಕ್ಕೆ ಕೆಲವು ನಿಯಮಗಳಿವೆ. 
	
ಉದಾಸೀನತೆ (ನೆಗ್ಲಿಜೆನ್ಸ್): ಂಯ ವಿಷಯದಲ್ಲಿ ಕರ್ತವ್ಯ ನಿರ್ವಹಣೆಯ ಭಾರಹೊತ್ತ ಃ ತನ್ನ ಕರ್ತವ್ಯವನ್ನುಲ್ಲಂಘಿಸಿ ಅದರಿಂದ ಂ ಗೆ ಬಾಧೆ ತಂದರೆ, ಃ ಪರಿಹಾರ ಕೊಡಬೇಕಾಗುತ್ತದೆ. ಸ್ನೇಹಿತನೊಬ್ಬ ತಂದ ಸೀಸೆಯಿಂದ ಒಬ್ಬಾಕೆ ಸ್ವಲ್ಪ ಜಿಂಜರ್ ಬೀರ್ ಬಗ್ಗಿಸಿಕೊಂಡು ಸೇವಿಸಿ, ಮತ್ತೆ ಸ್ವಲ್ಪ ಸೇವಿಸಲು ಬಗ್ಗಿಸಿದಾಗ ಅದರಿಂದ ಸತ್ತು ಕೊಳೆತ ಬಸವನ ಹುಳು ಹೊರಕ್ಕೆ ಬಂತು. ಇದರಿಂದ ತಲ್ಲಣಗೊಂಡ ಆಕೆ ರೋಗಪೀಡಿತಳಾದಳು. ತಯಾರಕರು ಕರ್ತವ್ಯವನ್ನುಲ್ಲಂಘಿಸಿದ್ದಾರೆಂದೂ ಪರಿಹಾರ ಕೊಡಬೇಕೆಂದೂ ತೀರ್ಮಾನವಾಯಿತು (ಡೋನೋ ವರ್ಸಸ್ ಸ್ಟೀವನ್ ಸನ್ 1932, ಎ.ಸಿ. 562). ಹೀಗೆಯೆ ವೈದ್ಯರೂ ವಕೀಲರೂ ಹಾಗೂ ಇನ್ನಿತರ ಬಾಬುಗಳಲ್ಲಿ ನೈಪುಣ್ಯ ಪಡೆದವರೂ ಕರ್ತವ್ಯದಲ್ಲಿ ಉದಾಸೀನರಾದರೆ ಪರಿಹಾರ ಕೊಡಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಪರಿಣತನಾದ ವೈದ್ಯನೊಬ್ಬ ಒಬ್ಬನ ಉದರಶಸ್ತ್ರಕ್ರಿಯೆ ಮಾಡಿದ ಕೆಲವು ದಿನಗಳ ಅನಂತರ ಅವನ ಉದರದಲ್ಲಿ ಹೀರೊತ್ತು (ಸ್ವ್ಯಾಬ್) ಕಾಣಿಸಿತು. ವೈದ್ಯ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು (ಮಾಹೊನ್ ವರ್ಸಸ್ ಅಸಬರ್ನ್ 1939. 2 ಕೆ.ಬಿ. 14)

ಪೀಡೆ, ಅನಿಷ್ಟ (ನ್ಯೂಸೆನ್ಸ್): ಮತ್ತೊಬ್ಬರ ಚಿರಾಸ್ತಿಯ ಉಪಯೋಗದಲ್ಲಿ ಅಥವಾ ಸಂಬಂಧಪಟ್ಟ ಅವನ ಹಕ್ಕಿನ ವಿಷಯದಲ್ಲಿ ಕಾನೂನುಬದ್ಧವಲ್ಲದ ರೀತಿಯಲ್ಲಿ ಅಡ್ಡಿ ತರುವುದು ಅನಿಷ್ಟ ಅಥವಾ ಪೀಡೆಯಾಗಿರುತ್ತದೆ. ಅನಿಷ್ಟದಲ್ಲಿ ಎರಡು ಬಗೆ. ವ್ಯಕ್ತಿಗೆ ಅನಿಷ್ಟ ಮತ್ತು ಸಾರ್ವಜನಿಕರಿಗೆ ಅನಿಷ್ಟ ಎಂದು. ಅಡ್ಡಿ ಯಾವ ರೀತಿಯದು? ಅದರಿಂದ ಅನಿಷ್ಟ ಉಂಟಾಗಿದೆಯೆ? ಎಂಬುದನ್ನು ನ್ಯಾಯಾಲಯ ನಿರ್ಣಯಿಸುತ್ತದೆ. ವಿದ್ಯುಚ್ಛಕ್ತಿಯ ಟ್ರಾನ್ಸ್ ಫಾರ್ಮರ್ ಉಂಟು ಮಾಡುವ ಶಬ್ದ ಚರ್ಚಿನ ಧರ್ಮೋಪನ್ಯಾಸಕ್ಕೆ ಪೀಡೆಯಲ್ಲ (ಹೀತಿ ವರ್ಸಸ್ ಬ್ರೈಟನ್ 1908, 98 ಎಲ್. ಟಿ. 718). ಕೆಳಮನೆಯ ಕಾಗದದ ಡಬ್ಬ ಮಾಡುವವ ಉಪಯೋಗಿಸುವ ಶಾಖದಿಂದ ಮೇಲ್ಮನೆಯವ ಇಟ್ಟಿದ್ದ. ಸೂಕ್ಷ್ಮರೀತಿಯ ಕಾಗದ ಅನುಪಯುಕ್ತವಾಗುವುದು ಪೀಡೆಯಲ್ಲ (ರಾಬಿನ್ ಸನ್ ವರ್ಸಸ್ ಕಿಲ್ ವರ್ಟ್ 1889, 41 ಸಿ.ಎಚ್.ಡಿ. 88). ಸಂಗೀತಗಾರನೊಬ್ಬನ ಪಕ್ಕದ ಮನೆಯಲ್ಲಿದ್ದವನೊಬ್ಬ ಸಂಗೀತದ ನಿತ್ಯಪಾಠಗಳಿಂದ ತೊಂದರೆಗೊಂಡು, ಸಂಗೀತ ಆರಂಭವಾದೊಡನೆ ಕೂಗುವುದು, ಶಿಳ್ಳೆ ಹೊಡೆಯುವುದು, ತಟ್ಟೆ ಬಡಿಯುವುದು ಮುಂತಾದುವನ್ನು ಮಾಡಿ ಪಾಠ ಮುಂದುವರಿಯದಂತೆ ಅಡ್ಡಿ ಮಾಡಿದ. ಸಂಗೀತಗಾರನಿಗೆ ಆತ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು (ಕ್ರಿಸ್ಟಿ ವರ್ಸಸ್ ಡೇವಿ 1893. 1 ಸಿ.ಎಚ್. 316). ಅನಿಷ್ಟದ ವ್ಯಾಪ್ತಿ ಸುವಿಸ್ತಾರವಾಗಿದೆ. ಅದರ ಸ್ವರೂಪವನ್ನು ನ್ಯಾಯಾಲಯಗಳ ತೀರ್ಪುಗಳಿಂದ ತಿಳಿಯಬಹುದು.
	
ವಿಶೇಷ ಹೊಣೆ (ಸ್ಟ್ರಿಕ್ಟ್ ಲಯಬಿಲಿಟಿ): ಯಾವ ದುರುದ್ದೇಶ ಅಥವಾ ಉದಾಸೀನತೆಯಿಲ್ಲದಿದ್ದರೂ ಕೆಲವು ನಿಯಮಿತ ಸಂದರ್ಭಗಳಲ್ಲಿ ಒಬ್ಬ ವಿಶೇಷ ಹೊಣೆಗೆ ಬದ್ಧನಾಗಬಹುದು. ಇದಕ್ಕೆ ರೈಲ್ಯಾಂಡ್ ವರ್ಸಸ್ ಫ್ಲೆಚರ್ ಹೊಣೆ ಎಂದು ಕರೆಯುತ್ತಾರೆ. ಒಬ್ಬ ಗಿರಣಿ ಮಾಲೀಕ ತನ್ನ ಸ್ವಂತ ಭೂಮಿಯಲ್ಲಿ ಒಂದು ದೊಡ್ಡ ನೀರಿನ ತೊಟ್ಟಿ ಕಟ್ಟಲು ಕಂಟ್ರಾಕ್ಟರುಗಳನ್ನು ನೇಮಿಸಿದ. ತೊಟ್ಟಿ ಕಟ್ಟುವ ಜಾಗಕ್ಕೂ ಪಕ್ಕದ ಮತ್ತೊಬ್ಬನ ಗಣಿಗೂ ಮಧ್ಯೆ ಕಂದಕಗಳಿದ್ದು, ಅವುಗಳನ್ನು ಕೂಡುಗಂಬಗಳಿಂದ ಮುಚ್ಚಿದ್ದರು. ಕಲ್ಲುಮಣ್ಣಿನಿಂದ ಮುಚ್ಚಿದ್ದ ಅವು ಗೋಚರವಾಗುವಂತಿರಲಿಲ್ಲ. ತೊಟ್ಟಿ ನಿರ್ಮಿಸಲ್ಪಟ್ಟ ಅನಂತರ ಅದಕ್ಕೆ ಪೂರ್ತಿ ನೀರು ತುಂಬಲಾಯಿತು. ನೀರು ಕೂಡುಗಂಬಗಳನ್ನೊಡೆದುಕೊಂಡು ಗಣಿಗೆ ಪ್ರವಹಿಸಿತು. ಔದಾಸೀನ್ಯವಿಲ್ಲದಿದ್ದರೂ ದುರುದ್ದೇಶವಿಲ್ಲದಿದ್ದರೂ ಗಿರಣಿ ಮಾಲೀಕ ಪರಿಹಾರ ಕೊಡಬೇಕೆಂದು ತೀರ್ಮಾನಿಸಲಾಯಿತು (ರೈಲ್ಯಾಂಡ್ ವರ್ಸಸ್ ಫ್ಲೆಚರ್ 1868. 3. ಎಚ್.ಎಲ್.330). ವಿಶೇಷ ಹೊಣೆಯ ವ್ಯಾಪ್ತಿ ಅಪಕೃತ್ಯದಲ್ಲಿ ಗಮನಾರ್ಹ ಸ್ಥಾನ ಪಡೆದಿದೆ.					
(ಎಂ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ